ಪ್ಲ್ಯಾನೆಟೇರಿಯಮ್ (ತಾರಾಲಯ)

	ಭೂಮಿಯ ಮೇಲಿನ ಯಾವುದೇ ಬಿಂದುವಿನಿಂದ ಅಥವಾ ಅದರ ಸುತ್ತಮುತ್ತಲಿನ ಆಕಾಶವಲಯದಿಂದ ಭೂತ ವರ್ತಮಾನ ಭವಿಷ್ಯತ್ ಯಾವುದೇ ಕಾಲದಲ್ಲಿ ಕಾಣುವಂತೆ ನಕ್ಷತ್ರಗಳನ್ನೂ ಗ್ರಹಗಳನ್ನೂ ನಿಖರವಾಗಿ ಪಡಿಮೂಡಿಸುವ ಪ್ರಕ್ಷೇಪಣ ಸಾಧನ. ಕೃತಕ ನಭೋಮಂಡಲ, ಗ್ರಹಗೃಹ ಎಂಬವು ಪರ್ಯಾಯ ಪದಗಳು. ಆಕಾಶದ ಯಾಂತ್ರಿಕ-ವೈದ್ಯತ ತದ್ರೂಪವಿದು. ಇದರಲ್ಲಿ ಮೂರು ಘಟಕಗಳಿವೆ: ನೈಸರ್ಗಿಕ ನಕ್ಷತ್ರಗಳ ನೈಜ ಪ್ರಕಾಶಬೀರುವ ನಕ್ಷತ್ರದೀಪ; ಭೂಮಿಯ ಮೇಲಿನ ಅಥವಾ ಭೂಮಿಯಿಂದ ಹೊರಗಿನ ಚಲನೆಗೆ ಅವಕಾಶ ಮಾಡಿಕೊಡುವ ಗ್ರಹ ಪ್ರಕ್ಷೇಪಣ ವ್ಯವಸ್ಥೆ; ನಿರ್ದಿಷ್ಟ ಕಾರ್ಯಕ್ರಮಕ್ಕೆ ಸಾಧನವನ್ನು ಅನುಗೊಳಿಸುವಾಗ ಎದುರಾಗುವ ಯಾಂತ್ರಿಕ ಮತ್ತು ಗಣಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಗಣಕ.
ಆಕಾಶದ ವಿವಿಧ ದೃಶ್ಯಗಳು ಪ್ರಾಚೀನ ಕಾಲದಿಂದಲೂ ಮಾನವನಿಗೆ ಆಕರ್ಷಣೀಯವಾಗಿದ್ದುವು. ಇರುಳ ಬಾನಿನಲ್ಲಿ ಹರಡಿಹೋಗಿದ್ದ ನೂರಾರು ನಕ್ಷತ್ರಗಳನ್ನು ಅವನು ಗಮನಿಸಿದ್ದ. ಶತಮಾನ ಪರ್ಯಂತ ತಾರೆಗಳನ್ನೂ ಅವು ರೂಪಿಸುವ ರಂಗವಲ್ಲಿಗಳನ್ನೂ ವೀಕ್ಷಿಸಿ, ವಿಶ್ಲೇಷಿಸಿ ಅವುಗಳಿಗೆ ಕಲ್ಪನೆಯ ಉಡುಪು ತೊಡಪು ತೊಡಿಸಿ ಬೇರೆ ಬೇರೆ ಹೆಸರು ಕೊಟ್ಟ. ಲುಬ್ಧಕ, ಅಗಸ್ತ್ಯ, ಜ್ಯೇಷ್ಠಾ, ಧ್ರುವನಕ್ಷತ್ರ ಮುಂತಾದವು ಬಿಡಿ ತಾರೆಗಳಾದರೆ ಮೇಷ, ವೃಷಭ, ಸಪ್ತರ್ಷಿಮಂಡಲ, ತ್ರಿಶಂಕು ಮುಂತಾದವು ನಕ್ಷತ್ರಪುಂಜಗಳು. ರಂಗವಲ್ಲಿಗಳು ಒದಗಿಸಿದ ಹೆಚ್ಚು ಕಡಿಮೆ ಶಾಶ್ವತ ಹಿನ್ನೆಲೆಯ ಮುಂದೆ ಕೆಲವೊಂದು ನಕ್ಷತ್ರಗಳು ತಮ್ಮ ನೆಲೆಗಳನ್ನು ಬದಲಿಸುತ್ತಿರುವುದು ಅವನು ಗಮನಕ್ಕೆ ಬಂದಿತು. ಇವು ಸೌರವ್ಯೂಹ ಗ್ರಹಗಳೆಂಬ ಸಂಗತಿ ಇಂದು ಗೊತ್ತಿದೆ. ಸೂರ್ಯನ ನಿರಂತರ ಪೂರ್ವ-ಪಶ್ಚಿಮ ಪರ್ಯಟನೆ, ಚಂದ್ರನ ಕಲೆಗಳ ಕ್ರಮಬದ್ಧ ಆಂದೋಳನೆ, ಅನಿಯತಕಾಲಿಕವಾಗಿ ಮೈದೋರುತ್ತಿದ್ದ ಗಗನ ವೈಭವ ಗ್ರಹಣ ದೃಶ್ಯಗಳು ಮುಂತಾದವುಗಳಿಂದ ಅವನು ಮೂಕ ವಿಸ್ಮಿತವಾಗಿದ್ದ.

ಹೀಗೆ ನಾಕ್ಷತ್ರಿಕಾಕಾಶದ ಬಗೆಗೆ ಮಾನವ ಅಧಿಕಾಧಿಕ ಪರಿಚಯ ಗಳಿಸುತ್ತಿದ್ದಂತೆ ಅಲ್ಲಿಯ ಆಕೃತಿಗಳ ಯಥಾವತ್ತು ವರ್ಣಚಿತ್ರಗಳನ್ನು ಕುಂಚಿಸುವುದರಲ್ಲಿಯೂ ಗೋಳಕಗಳಂಥ ಸಾಧನಗಳ ಮೇಲೆ ಅವನ್ನು ಬಿಡಿಸುವುದರಲ್ಲಿಯೂ ಆಸಕ್ತಿ ತಳೆದ. ಈಗ ಉಪಲಬ್ಧವಿರುವ ಅತ್ಯಂತ ಪ್ರಾಚೀನ ಶಿಲ್ಪವೆಂದರೆ ಕ್ರಿಪೂ 1ನೆಯ ಶತಮಾನದ ಫಾರ್ನೆಸ್ ಆಕಾಶ ಘನಚಿತ್ರಣ. ಶ್ವೇತ ಶಿಲೆಯಲ್ಲಿ ಕಡೆದ ಈ ಪ್ರತಿಮೆಯಲ್ಲಿ ಅಟ್ಲಾಸ್ ಎಂಬ ದೈತ್ಯ, ಆಕಾಶಗೋಳದ ಮಾದರಿಯನ್ನು ತನ್ನ ಭುಜದ ಮೇಲೆ ಧರಿಸಿ ನಿಂತಿದ್ದಾನೆ.
ವರ್ತಮಾನ ಯುಗದ ಸನಿಹಕ್ಕೆ ಬಂದಂತೆ 17ನೆಯ ಶತಮಾನದಲ್ಲಿ ಪ್ರಚಾರದಲ್ಲಿದ್ದ ಗಾಟ್ಟರ್ಪ್ ಗೋಳಕದಂಥ ಆಕಾಶಗೋಳಗಳನ್ನು ಕಾಣುತ್ತೇವೆ. ತಾಮ್ರದಿಂದ ರಚಿಸಿದ ಟೊಳ್ಳು ಗೋಳವಿದು. ಇದರ ಒಳಮೈಮೇಲೆ ನಾಕ್ಷತ್ರಿಕಾಕಾಶದ ತದ್ವತ್ತು ಚಿತ್ರಗಳನ್ನು ಬಿಡಿಸಲಾಗಿತ್ತು. ಹನ್ನೆರಡು ಮಂದಿ ಪ್ರೇಕ್ಷಕರು ಇದರ ಒಳಹೊಕ್ಕು ನಕ್ಷತ್ರಚಿತ್ರಗಳನ್ನು ನೋಡಲು ಅವಕಾಶವಿತ್ತು. ಇದೇ ಸುಮಾರಿಗೆ ಜರ್ಮನಿಯ ಯಾನಾ ಎಂಬ ನಗರದಲ್ಲಿ ಕೂಡ ಗಾಟ್ಟರ್ಪ್ ಮಾದರಿಯ ಗೋಳಕವನ್ನು ನಿರ್ಮಿಸಲಾಗಿತ್ತು. ಈ ಸಾಲಿಗೆ ಸೇರಿಸಬಹುದಾದ ಇತರ ಮಾದರಿಗಳ ಪೈಕಿ ಹೆಸರಿಸಬೇಕಾದದ್ದು ಕೇಂಬ್ರಿಜಿನಲ್ಲಿ ರಾಬರ್ಟ್ ಲಾಂಗ್ ಎಂಬಾತ ಕಟ್ಟಿದ ಗೋಳಕ (1758). ಪ್ರಾಯಶಃ ಟೊಳ್ಳುಗೋಳಗಳ ಪೈಕಿ ಇದು ಬಲು ದೊಡ್ಡ ಗಾತ್ರದ್ದು. ಇದರ ವ್ಯಾಸ 5.5. ಮೀ. ವಿಭಿನ್ನ ಕಾಂತಿಮಾನಗಳ ತಾರೆಗಳನ್ನು ಸೂಚಿಸಲು ಇದರ ಮೈಯಲ್ಲಿ ವಿಭಿನ್ನಗಾತ್ರಗಳ ರಂಧ್ರಗಳನ್ನು ಕೊರೆಯಲಾಗಿತ್ತು. ಶಿಕಾಗೊದಲ್ಲಿ ಕಟ್ಟಲಾದ ಸುಪ್ರಸಿದ್ಧ ಆ್ಯಡ್‍ವುಡ್‍ಗೋಳಕ (1912) ಇಂತಹ ಇನ್ನೊಂದು ಮಾದರಿ.

ಯಾಂತ್ರಿಕ ಮಾದರಿಯ ಗ್ರಹಗೃಹಗಳ ನಿರ್ಮಾಣವೂ ಕ್ರಮಶಃ ಅಭಿವರ್ಧನೆಗೊಳ್ಳುತ್ತ ಬಂದಿದೆ. ಸೂರ್ಯನ ಸುತ್ತ ಗ್ರಹಗಳ ಪರಿಭ್ರಮಣೆಯನ್ನು ಆಯಾ ಕಕ್ಷೆಗಳಲ್ಲಿ ಪ್ರದರ್ಶಿಸುವುದು ಇಲ್ಲಿಯ ಉದ್ದೇಶ. ಈ ಬಗ್ಗೆ ತನ್ನ ಮನೆಯ ತಾರಸಿಯಲ್ಲೇ ಮೊದಲ ಮಾದರಿ ತಯಾರಿಸಿದವನು ನೆದರ್‍ಲೆಂಡ್ಸ್‍ನ ಐಸೆ ಐಸಿಂಗ. ನೂರೈವತ್ತು ವರ್ಷಗಳಿಂದ ಈ ಮಾದರಿ ಕರಾರುವಾಕ್ಕಾಗಿ ನಡೆಯುತ್ತಿದೆ. ಇದಕ್ಕಾಗಿ ಯುಕ್ತ ಅನುಪಾತಗಳಲ್ಲಿ ನಿರ್ಮಿಸಲಾದ ಗಿಯರ್ ಸರಪಳಿಯನ್ನು ಬಳಸಲಾಯಿತು. ಈ ತರಹದ ಯಾಂತ್ರಿಕ ಗ್ರಹಗೃಹಗಳ ಪೈಕಿ ಅತ್ಯಂತ ಪ್ರೇಕ್ಷಣೀಯವಾದದ್ದು ಡಾಯ್ಚೆಸ್ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲಾದ (1920) ಕೊಪರ್ನಿಕಸ್ ಪ್ಲ್ಯಾನೆಟೇರಿಯಮ್. ಈ ಸಾಧನವನ್ನು ಸುಮಾರು 12 ಮೀ ವ್ಯಾಸ ಮತ್ತು 2.8 ಮೀ ಎತ್ತರದ ವರ್ತುಳೀಯ ಕೋಣೆಯ ಚತ್ತುವಿನ ನಡುಬಿಂದುವಿಗೆ ಜೋಡಿಸಲಾಗಿತ್ತು. ಇದು ಸೌರವ್ಯೂಹದ ಮಾದರಿ. ಇದರಲ್ಲಿ ಶನಿಯ ಕಕ್ಷೆ 11.25 ಮೀ ವ್ಯಾಸದ ವೃತ್ತ. ಸೂರ್ಯನನ್ನು 220 ಮೀಮೀ ವ್ಯಾಸದ ಹಿರಿಗೋಲಿಯೂ ಗ್ರಹಗಳನ್ನು 40-180 ಮೀಮೀ ವ್ಯಾಸದ ಮರಿಗೋಲಿಗಳೂ ಪ್ರತಿನಿಧಿಸುತ್ತವೆ. ವಿದ್ಯುಚ್ಚಾಲಿತ ಸಲಕರಣೆಯ ನೆರವಿನಿಂದ ಮರಿಗೋಲಿಗಳು (ಗ್ರಹಗಳು) ಹಿರಿಗೋಲಿಯ (ಸೂರ್ಯನ) ಸುತ್ತ ಪರಿಭ್ರಮಿಸುವ ಏರ್ಪಾಡು ಉಂಟು. ಪರಿಭ್ರಮಣಾವಧಿ ಆಯಾ ಗ್ರಹದ ವರ್ಷಕ್ಕೆ ಅನುಪಾತೀಯವಾಗಿದೆ.
ಈ ಯಾಂತ್ರಿಕ ಗ್ರಹಗೃಹಗಳು ಯಾವುವೂ ಪರಿಪೂರ್ಣವಾಗಿರಲಿಲ್ಲ, ಪರಿಷ್ಕಾರವೂ ಆಗಿರಲಿಲ್ಲ. ಆಕಾಶದ ಗಂಭೀರತೆಯ ಬಗ್ಗೆ ಇಲ್ಲವೇ ಸೌರವ್ಯೂಹದಲ್ಲಿ ಗ್ರಹಗಳ ವಿತರಣೆಯ ಬಗ್ಗೆ ಇವು ವೀಕ್ಷಕನಿಗೆ ಸ್ಪಷ್ಟ ಕಲ್ಪನೆ ಮೂಡಿಸುವುದರಲ್ಲಿ ಸಫಲವಾಗಿರಲಿಲ್ಲ. ಹೀಗಾಗಿ ಭೂಕೇಂದ್ರೀಯ ಗಗನಪ್ರತಿರೂಪವೊಂದರ ರಚನೆಯ ಬಗ್ಗೆ ಆಸ್ಕರ್ ಫಾನ್‍ಮಿಲ್ಲರ್ ಯೋಚಿಸಿದ. ಈತ ಮ್ಯೂನಿಕ್‍ನಲ್ಲಿಯ ಡಾಯ್ಚೆಸ್ ವಸ್ತುಸಂಗ್ರಯಾಲಯದ ಸ್ಥಾಪಕನಿರ್ದೇಶಕ. ಯಾನಾದ ಝೈಸ್‍ವಕ್ರ್ಸ್‍ಗೆ ಇವನು ಕೊಟ್ಟ ಯೋಜನೆಯ ಪ್ರಕಾರ 6ಮೀ ವ್ಯಾಸದ ಗೋಳ ಆಕಾಶಗೋಳವನ್ನು ಪ್ರತಿನಿಧಿಸುತ್ತದೆ. ಇದಕ್ಕೆ ಸ್ವ.ಂತಾಕ್ಷದ ಸುತ್ತ ಆವರ್ತನ ಚಲನೆ ಉಂಟು. ಇದರ ಒಳಮೈಗೆ ಲಗತ್ತಿಸಿದ ಜಾಜ್ವಲ್ಯಮಾನ ದೀಪಗಳು ನಕ್ಷತ್ರಗಳನ್ನು ಪ್ರತಿನಿಧಿಸುತ್ತವೆ. ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆ ಕಾಣಿಸಲು ಆಯಾ ದೀಪಗಳಿಗೆ ಸಂಕೀರ್ಣ ಯಾಂತ್ರಿಕ ಚಲನೆಗಳನ್ನು ನೀಡಲಾಗುತ್ತಿತ್ತು. ಈ ಅತಿ ಜಟಿಲ ಯಾಂತ್ರಿಕ ಮಾದರಿಯನ್ನು ನಿರ್ಮಾಣ ಪೂರ್ವದಲ್ಲೇ ಕೈಬಿಡಬೇಕಾಯಿತು. ಏಕೆಂದರೆ ಆ ವೇಳೆಗಾಗಲೇ ಪ್ರಕ್ಷೇಪಣಮಾದರಿಯ ಪ್ಲ್ಯಾನೆಟೇರಿಯಮ್ ವಾಸ್ತವತೆಯಾಗಿ ಮೈದಳೆದಿತ್ತು.
ಪ್ರಕ್ಷೇಪಣ ತತ್ತ್ವವನ್ನು ಆಧರಿಸಿ ನಿರ್ಮಿಸಿದ ಮೊದಲ ಸಾಧನೆ ಸ್ಟೀರಾಪ್ಟಿಕನ್ ವ್ಯವಸ್ಥೆ. ಇದೊಂದು ಗೋಳಕ. ಇದರ ನಡುವಿನಲ್ಲಿ 500 ವಾಟ್ ಸಾಮಥ್ರ್ಯದ ಜಾಜ್ವಲ್ಯಮಾನ ದೀಪ. ಇದಕ್ಕೆ ಲಗತ್ತಾಗಿ ಉರುಳೆಯಾಕಾರದ ಒಂದು ಸಲಕರಣೆ. ಇದರಲ್ಲಿ ಸೂರ್ಯ, ಚಂದ್ರ ಮತ್ತು ಐದು ದೃಗ್ಗೋಚರ ಗ್ರಹಗಳನ್ನು ಪ್ರಕ್ಷೇಪಿಸಲು ಏರ್ಪಾಡು. ನಕ್ಷತ್ರಬಿಂದುಗಳನ್ನು ಪ್ರತಿನಿಧಿಸಲು ಮಸೂರಗಳ ಸರಮಾಲೆಯ ಸಂಕೀರ್ಣ ಜೋಡಣೆ. ಇವೆಲ್ಲವನ್ನೂ ಬಲು ನಾಜೂಕಾದ ಗಿಯರ್ ವ್ಯವಸ್ಥೆಗೆ ಹೊಂದಿಸಿದೆ. ಅರ್ಧಗೋಳಾಕಾರದ ಗುಂಬಜದ ನಡುಬಿಂದುವಿನಲ್ಲಿ ಸ್ಟಿರಾಪ್ಟಿಕನ್ ಉಪಕರಣದ ಸ್ಥಾನ. ಗುಂಬಜದ ಒಳಮೈಯೇ ಆಕಾಶ. ಹೊರಗಿನ ಬೆಳಕನ್ನು ಕೈದು ಮಾಡಿದಾಗ ಗುಂಬಜ ಇರುಳ ಬಾನನ್ನು ಪ್ರತಿನಿಧಿಸುತ್ತದೆ. ಉಪಕರಣದಿಂದ ಬೆಳಕಿನ ಬಿಂದುಗಳನ್ನು ಗುಂಬಜದ ಒಳಮೈಗೆ ಪ್ರಕ್ಷೇಪಿಸಿದಾಗ ನಕ್ಷತ್ರಖಚಿತಾಕಾಶ, ಇದರಲ್ಲಿ ಸೂರ್ಯ ಚಂದ್ರ ಗ್ರಹಗಳ ಚಲನೆ ಮೊದಲಾದ ಆಕಾಶ ದೃಶ್ಯಗಳು ಪಡಿಮೂಡುತ್ತವೆ. ನಕ್ಷತ್ರಗಳ ಸಾಪೇಕ್ಷ ಸ್ಥಾನಗಳನ್ನೂ ಪ್ರಕಾಶಮಾನಗಳನ್ನೂ ಕಾಪಾಡಿಕೊಳ್ಳಲಾಗಿದೆ. ಆಕಾಶಗಂಗೆಯ ಪಟ್ಟಿಯನ್ನೂ 6ನೆಯ ಕಾಂತಿ ಮಾನದವರೆಗಿನ 4500 ಬಿಡಿ ನಕ್ಷತ್ರಗಳನ್ನೂ ಇಲ್ಲಿ ಕಾಣಬಹುದು.

ಈ ಸಾಧನವನ್ನು 10-16ಮೀ ವ್ಯಾಸದ ಅರ್ಧಗೋಳಾಕಾರದ ಗುಂಬಜಕ್ಕೆ ಹೊಂದುವಂತೆ ನಿರ್ಮಿಸಿದೆ. ಮುಖ್ಯವಾದ ಕೆಲವು ನಕ್ಷತ್ರಪುಂಜಗಳ ಹೆಸರುಗಳನ್ನು ಗುಂಬಜದ ಮೇಲೆ ಪ್ರಕ್ಷೇಪಿಸುವುದು ಸಾಧ್ಯ. ಆಕಾಶಗೋಳದ ದೈನಂದಿನಾವರ್ತನೆಯನ್ನು 50 ಸೆಕೆಂಡುಗಳಿಂದ 4 ಮಿನಿಟುಗಳ ಅವಧಿಯಲ್ಲಿ ಪ್ರದರ್ಶಿಸಬಹುದು. ವಾರ್ಷಿಕ (ಪರಿಭ್ರಮಣೆ) ಮತ್ತು ಅಯನ ಚಲನೆಗಳನ್ನು ಕೂಡ ಇದರಲ್ಲಿ ಅಳವಡಿಸಿದೆ.

ಪ್ರಪಂಚದ ವಿವಿಧ ನಗರಗಳಲ್ಲಿ ಈಗ ಇರುವ ಪ್ಲ್ಯಾನೆಟೇರಿಯಮ್ಮುಗಳ ಮಾದರಿಯ ಮೊದಲ ರಚನೆ ಅಥವಾ ಸಾಧನ ಸ್ಥಾಪಿತವಾದದ್ದು ಪುನಃ ಮ್ಯೂನಿಕ್ ನಗರದ ಡಾಯ್ಚೆಸ್ ವಸ್ತುಸಂಗ್ರಹಾಲಯದಲ್ಲಿಯೇ, 1923ರಲ್ಲಿ. ಇದೇ ಮಾದರಿಯ ರಚನೆಗಳ ಎರಡನೆಯ ಕಂತನ್ನು ತರುವಾಯದ ವರ್ಷಗಳಲ್ಲಿ ದಿ ಹೇಗ್ ನಗರಕ್ಕೆ ರವಾನಿಸಲಾಯಿತು. ಅಲ್ಲಿಂದ ಮುಂದಕ್ಕೆ ಯೂರೊಪಿನ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳ ವಿವಿಧ ನಗರಗಳಲ್ಲಿ ಸ್ಥಾಪಿಸಲೋಸ್ಕರ ಪ್ಲ್ಯಾನೆಟೇರಿಯಮ್ ಉಪಕರಣಗಳು ಭೂರಿ ಪ್ರಮಾಣದಲ್ಲಿ ತಯಾರಾಗತೊಡಗಿದುವು.

ಮೊದಲ ಉಪಕರಣವನ್ನು ನಿರ್ದಿಷ್ಟವಾಗಿ ಮ್ಯೂನಿಕ್ಕಿನ ಅಕ್ಷಾಂಶಕ್ಕೆ ಹೊಂದುವಂತೆ ಅಲೇಖಿಸಲಾಗಿತ್ತು. ತರುವಾಯದ ರಚನೆಗಳನ್ನು ಆಯಾ ನೆಲೆಗಳ ಅಕ್ಷಾಂಶಗಳಿಗೆ ಹೊಂದುವಂತೆ ಕಟ್ಟಲಾಯಿತು. ಅಂದ ಮೇಲೆ ಒಂದು ನಗರದ ಅಕ್ಷಾಂಶಕ್ಕೆಂದು ರಚಿತವಾದ ಉಪಕರಣ ಬೇರೆ ನಗರಗಳಲ್ಲಿ ನಿಷ್ಪ್ರಯೋಜಕವಾಗುವುದು ದಿಟ. ಈ ತೊಡಕನ್ನು ನಿವಾರಿಸಿ ಉತ್ತರ ಗೋಳಾರ್ಧದಲ್ಲಿಯ ಯಾವುದೇ ಅಕ್ಷಾಂಶಕ್ಕೆ ಹೊಂದುವಂಥ ಉಪಕರಣವನ್ನು ಕ್ರಮೇಣ ರೂಪಿಸಲಾಯಿತು. ಇಲ್ಲಿಂದ ಮುಂದೆ ಬಂದದ್ದೇ ಸಾರ್ವತ್ರಿಕ ಪ್ರರೂಪದ ಪ್ರಕ್ಷೇಪಣೋಪಕರಣ. ಭೂಮಿಯ ಮೇಲಿನ ಯಾವುದೇ ನೆಲೆಯಿಂದ ಕಾಣುವಂಥ ನಕ್ಷತ್ರಚಿತ್ರಾಂಕಿತಾಕಾಶವನ್ನು ಇದರಿಂದ ಪ್ರಕ್ಷೇಪಿಸಬಹುದಾಗಿತ್ತು. ಆಕಾಶದ ದೈನಂದಿನ ಹಾಗೂ ವಾರ್ಷಿಕ ಚಲನೆಗಳನ್ನು ಪ್ರದರ್ಶಿಸಲು ಇದರಲ್ಲಿ ಸೌಕರ್ಯವಿದ್ದುದರ ಜೊತೆಗೆ, ಸ್ವತಂತ್ರವಾಗಿ, ಧ್ರುವ ಬಿಂದುವಿನ ಅಯನವನ್ನು ಕೂಡ ಕಾಣಿಸಲು ಏರ್ಪಾಡು ಇತ್ತು. ಆಯನ ಫಲಕಗಳು ಅಕ್ಷಾಂಶ ರೇಖೆಗಳ ಜಾಲ ಮತ್ತು ಕ್ರಾಂತಿವೃತ್ತ ಇದರಲ್ಲಿ ಇದ್ದುದರಿಂದ ನಾಕ್ಷತ್ರಿಕಾಶದ ವೈಜ್ಞಾನಿಕಾಧ್ಯಯನವನ್ನು ವ್ಯವಸ್ಥಿತವಾಗಿ ಮಾಡಬಹುದಾಗಿತ್ತು. ಆಕಾಶಕಾಯಗಳ ನಿರ್ದೇಶಕಗಳನ್ನು ಗುರುತಿಸುವುದು ಸುಲಭವಾಗಿತ್ತು. ದೊಡ್ಡ ಗಾತ್ರದ ಗುಮ್ಮಟದ ಮೇಲೆ ಚಿತ್ರಗಳನ್ನು ಮೂಡಿಸಲು ಅನುಕೂಲವಾಗುವಂತೆ ತರುವಾಯದ ರಚನೆಗಳಲ್ಲಿ ದೃಗ್ವ್ಯವಸ್ಥೆಗಳನ್ನು ಯುಕ್ತವಾಗಿ ಮಾರ್ಪಡಿಸಲಾಯಿತು. 10ಮೀ ವ್ಯಾಸದಿಂದ ತೊಡಗಿ 25ಮೀ ವ್ಯಾಸದವರೆಗಿನ ವಿವಿಧ ಗಾತ್ರಗಳ ಗುಮ್ಮಟಗಳು ಇವೆ. ಮಾಸ್ಕೊದಲ್ಲಿರುವ ಪ್ಲ್ಯಾನೆಟೇರಿಯಮ್ ಪ್ರಪಂಚದಲ್ಲಿ ಅತಿ ದೊಡ್ಡದು. ಇದರ ಗುಮ್ಮಟದ ವ್ಯಾಸ 25 ಮೀ. ಕಲ್ಕತ್ತದಲ್ಲಿರುವ ಬಿರ್ಲಾ ಪ್ಲ್ಯಾನೆಟೇರಿಯಮಿನ ಗುಮ್ಮಟದ ವ್ಯಾಸ 23 ಮೀ. 

ಬಿರ್ಲಾ ಶೈಕ್ಷಣಿಕ ಅನುದಾನದ ವತಿಯಿಂದ ಭಾರತದ ಪ್ರಥಮ ಪ್ಲ್ಯಾನಿಟೇರಿಯಮ್ಮನ್ನು ಕಲ್ಕತ್ತದಲ್ಲಿ 1962 ಸೆಪ್ಟೆಂಬರ್ 29ರಂದು ಸ್ಥಾಪಿಸಲಾಯಿತು. ಪೂರ್ವ ಜರ್ಮನಿಯ ಯಾನಾದಲ್ಲಿರುವ ಕಾರ್ಲ್ ಝೈಸ್ ಎಂಬ ಪ್ರತಿಷ್ಠಿತ ಸಂಸ್ಥೆ ಇದನ್ನು ತಯಾರಿಸಿತು. ಸಾರ್ವತ್ರಿಕ ಪ್ರರೂಪದ ಅತ್ಯಂತ ಆಧುನಿಕ ಉಪಕರಣವಿದು. ಉತ್ತರ ಮತ್ತು ದಕ್ಷಿಣ ಗೋಳಾರ್ಧಗಳು ಸೇರಿದಂತೆ ಇದು 9000 ನಕ್ಷತ್ರಗಳನ್ನು ಅವುಗಳ ನೆಲೆಗಳು ಅತ್ಯಂತ ನಿಖರವಾಗಿರುವಂತೆ ಪ್ರಕ್ಷೇಪಿಸಬಲ್ಲದು. ಯಾವುದೇ ಅಕ್ಷಾಂಶದಿಂದ ಯಾವುದೇ ತಾರೀಕಿನ ಯಾವುದೇ ಮುಹೂರ್ತದಲ್ಲಿ ಕಾಣುವ ಆಕಾಶವನ್ನು ಕ್ಷಣಮಾತ್ರದಲ್ಲಿ ಬಿಂಬಿಸುವ ಏರ್ಪಾಡು ಇದರಲ್ಲಿವೆ. ಇಲ್ಲಿ ಉರುಳೆ ಆಕಾರದ ಸಭಾಂಗಣದ ಶಿರದ ಮೇಲೆ ಅರ್ಧಗೋಳಾಕಾರದ ಗುಮ್ಮಟ ಉಂಟು. ಇದು ನಕ್ಷತ್ರ ಚಿತ್ರಗಳನ್ನು ಪ್ರದರ್ಶಿಸಲು ಇರುವ ಕೃತಕ ನಭೋಮಂಡಲ. ಸಭಾಂಗಣದಲ್ಲಿ ಒಮ್ಮೆಗೆ 625 ಪ್ರೇಕ್ಷಕರು ಕುಳಿತು ನೋಡಲು ಅವಕಾಶವಿದೆ.
ಖಭೌತವಿಜ್ಞಾನಕ್ಕೆ ಸಂಬಂಧಿಸಿದವು, ಆಕಾಶ ವಿದ್ಯಮಾನಗಳು, ಆಕಾಶ ಯಾನಗಳು ಇತ್ಯಾದಿ ಕಾರ್ಯಕ್ರಮಗಳ ಕಾರಣ ಈ ಪ್ಲ್ಯಾನೆಟೇರಿಯಮ್ಮಿನ ಜನಪ್ರಿಯತೆಯಿಂದಾಗಿ ರಾಷ್ಟ್ರದ ಇತರ ಭಾಗಗಳಿಂದಲೂ ಪ್ಲ್ಯಾನೆಟೇರಿಯಮ್ಮುಗಳ ಸ್ಥಾಪನೆಗೆ ಬೇಡಿಕೆಗಳು ಬರತೊಡಗಿದವು. ಮುಂಬಯಿ, ಬರೋಡಾ, ಅಲಹಾಬಾದ್ ಮುಂತಾದೆಡೆಗಳಲ್ಲಿ ಕಾರ್ಯೋದ್ಯುಕ್ತವಾಗಿವೆ. ದೆಹಲಿಯಲ್ಲಿ ತೀನ್‍ಮೂರ್ತಿ ಸಂಕೀರ್ಣದಲ್ಲಿಯೂ ತಿರುಪತಿಯ ತಿರುಮಲೆ ಬೆಟ್ಟದ ಮೇಲೆಯೂ ಇವೆ. ಬೆಂಗಳೂರು ಸೇರಿದಂತೆ ಸುಮಾರು ಇಪ್ಪತ್ತು ಭಾರತದಾದ್ಯಂತ ಇವೆ. ಪ್ರಕ್ಷೇಪಣೋಪಕರಣಗಳಲ್ಲಿ ಕಾಲದಿಂದ ಕಾಲಕ್ಕೆ ನೂತನ ಸುಧಾರಣೆಯನ್ನು ತರಲಾಗುತ್ತಿದೆ. ಉದಾಹರಣೆಗೆ ಇಂದಿನ ಉಪಕರಣವೊಂದು ನಕ್ಷತ್ರ ಚಿತ್ರಾಂಕಿತಾಕಾಶದಲ್ಲಿ ಸೂರ್ಯ, ಚಂದ್ರನ, ಕಲೆಗಳು, ದೃಗ್ಗೋಚರ ಗ್ರಹಗಳು ಮುಂತಾದ ಮಾಮೂಲಿ ಚಿತ್ರಗಳನ್ನು ಪ್ರಕ್ಷೇಪಿಸುವುದರ ಜೊತೆಗೆ ಗ್ರಹಣ, ಉಲ್ಕಾಪತನ, ಧೂಮಕೇತು, ಉಪಗ್ರಹಪರಿವಾರ ಸಹಿತವಾದ ಮಹಾದೈತ್ಯ ಗ್ರಹ ಗುರು ಮತ್ತು ಬಳೆಗಳಿಂದಲೂ ಉಪಗ್ರಹಗಳಿಂದಲೂ ಪರಿವೇಷ್ಟಿತವಾದ ಶನಿಗ್ರಹ ಈ ದೃಶ್ಯಗಳನ್ನೂ ಪ್ರದರ್ಶಿಸಬಲ್ಲದು. ಸೌರವ್ಯೂಹದ ಪ್ರತಿರೂಪವನ್ನು ಮಾನಕಾನುಸಾರ ತೋರಿಸಿ ಗ್ರಹಗಳ ಚಲನವಲನಗಳನ್ನು ಕಾಣಿಸುವುದು ಸಾಧ್ಯವಿದೆ. ಈ ಚಿತ್ರ ವಿವಿಧದೂರಗಳಿಂದ ಹೇಗೆ ಕಾಣುವುದೆಂಬುದನ್ನು ಕೂಡ ಪ್ರಕ್ಷೇಪಿಸಬಹುದು. ವ್ಯೋಮಯಾನಿಗಳಿಗೆ-ಉದಾಹರಣೆಗೆ ಚಂದ್ರನ ಮೇಲೆ ನಿಂತವನಿಗೆ ಇಲ್ಲವೇ ಭೂಮಿಯ ಸುತ್ತ ಪರಿಭ್ರಮಿಸುವಾತನಿಗೆ-ವಿವಿಧ ನೆಲೆಗಳಿಂದ ಕಾಣುವ ಆಕಾಶಚಿತ್ರವನ್ನು ತೋರಿಸುವ ಏರ್ಪಾಡು ಈಗ ಉಂಟು. ಚಂದ್ರನ ವಿವಿಧ ವರಿಸೆಗಳನ್ನು ಪ್ರತ್ಯೇಕಿಸಿ ಲಂಬಿಸಿ ಬಿಂಬಿಸುವುದು ಕೂಡ ಸಾಧ್ಯ.

	ಲೇಸೇರಿಯಮ್ ಎಂಬುದು ತೀರ ಈಚೆಗಿನ ಅಭಿವರ್ಧನೆ. ಲೇಸರ್ ದೂಲಗಳನ್ನು ಗುಮ್ಮಟದ ಮೇಲಕ್ಕೆ ಬೀರಿ ನಕ್ಷತ್ರಬಿಂದುಗಳನ್ನು ಬಿಂಬಿಸುವ ಈ ಅತಿ ಸೂಕ್ಷೋಪಕರಣ ಮುಂಬರುವ ವರ್ಷಗಳಲ್ಲಿ ಈಗಿರುವ ಬೃಹತ್‍ಗಾತ್ರದ ಪ್ರಕ್ಷೇಪಣೋಪಕರಣವನ್ನು ಯಶಸ್ವಿಯಾಗಿ ವಿಸ್ಥಾಪಿಸುವ ಸಾಧ್ಯತೆ ಇದೆ.

ಇದಲ್ಲದೆ, ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಆಕರ್ಷಕ ಚಿತ್ರಗಳನ್ನೂ ಅನಿಮೇಷನ್‍ಗಳನ್ನೂ ಮೂಡಿಸುವ ತಂತ್ರಜ್ಞಾನ ಬಳಕೆಯಾಗುತ್ತದೆ. ಯುನಿವರ್ಸೇರಿಯಂ ಎಂಬ ಹೊಸಬಗೆಯ ಉಪಕರಣಗಳು ಈಗ ಜನಪ್ರಿಯವಾಗುತ್ತಿವೆ. 	(ಆರ್.ಎಸ್.ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ